ಸಡನ್ನಾಗಿ ಸಾಯದೆ ಇದ್ರೆ…?

ಪ್ರಜಾವಾಣಿ
13 Sep, 2016

13873232_10201958919890784_2216442879525978858_nನಾವು ಹುಟ್ಟಿದಾಗಲೇ ನಮ್ಮ ಸಾವು ಸಹ ಹುಟ್ಟಿರುತ್ತದೆ. ನಾವು ಈ ಕಡೆಯಿಂದ ಪ್ರಯಾಣ ಪ್ರಾರಂಭಿಸುತ್ತೇವೆ, ಸಾವು ಎದುರು ದಿಕ್ಕಿನಿಂದ ಪ್ರಯಾಣ ಆರಂಭಿಸುತ್ತದೆ. ಇಬ್ಬರೂ ಭೇಟಿಯಾಗಿ, ‘ಹಾಯ್’ ಅಂದಾಗ ಬದುಕಿಗೆ ಬಾಯ್ ಬಾಯ್.

ಆದ್ದರಿಂದ ಈ ಘಳಿಗೆಯನ್ನು ಅಸ್ವಾದಿಸಬೇಕು. ಈ ಕ್ಷಣವನ್ನು, ಈ ನಿಮಿಷವನ್ನು ಸುಖವಾಗಿ ಬದುಕಬೇಕು ಎನ್ನುವುದು ‘ಸಡನ್ನಾಗಿ ಸತ್ತೋದ್ರೆ’ ನಾಟಕದ ಆಶಯ.
ಅದರ ಜೊತೆಜೊತೆಯಲ್ಲಿಯೇ ಜಾಗತೀಕರಣದ ದಾಳಿ ಹೇಗೆ ಹದಿವಯಸ್ಸಿನವರನ್ನು ದ್ವೀಪವಾಗಿಸುತ್ತಿದೆ ಎನ್ನುವುದನ್ನೂ ಹೇಳಲು ನಾಟಕ ಪ್ರಯತ್ನಿಸುತ್ತದೆ.

ಹಾಸ್ಯ ನಾಟಕಗಳನ್ನು ಬರೆಯುವುದು ಕಷ್ಟ. ಏಕೆಂದರೆ ಟೈಮಿಂಗ್ ಒಂದು ಚೂರು ತಪ್ಪಿದರೆ, ಪಾತ್ರಧಾರಿಗಳ ಭಾಗವಹಿಸುವಿಕೆ ಒಂದಿಷ್ಟು ಹದಗೆಟ್ಟರೆ ಹಾಸ್ಯ ನಾಟಕ ಹಾಸ್ಯಾಸ್ಪದ ನಾಟಕವಾಗಿಬಿಡುವ ಅಪಾಯ ಇರುತ್ತದೆ.  ಆ ಮಟ್ಟಿಗೆ ಈ ನಾಟಕ ಗೆದ್ದಿದೆ.  ಪ್ರೇಕ್ಷಕರಲ್ಲಿ ನಗು ಉಕ್ಕಿಸುವಲ್ಲಿ ನಾಟಕ ಯಶಸ್ವಿ ಆಗುತ್ತದೆ. ನಾಟಕ ಮುಗಿಯುವಷ್ಟು ಹೊತ್ತೂ ನೋಡುಗರು ನಗುತ್ತಲೇ ಇರುತ್ತಾರೆ.

ನಾಟಕದ ಕಥೆ ಸರಳ. ಒಂದು ಮನೆ. ಅಜ್ಜಿ, ತಾತ, ಮಗ, ಸೊಸೆ, ಮೊಮ್ಮಗ. ಮೊಮ್ಮಗಳು ಇರುವ ಸಂಸಾರ. ಅತ್ತೆ ಸೊಸೆಯರ ನಡುವೆ ಶತಮಾನಗಳ ಜಗಳ.  ಅತ್ತೆಗೆ ಸೀರಿಯಲ್ ನೋಡುವ ಚಟ, ಅಜ್ಜನಿಗೆ ತನ್ನ ಕಾಯಿಲೆಗಳ ನೆನಪಿನ ಭಾರದಲ್ಲಿ ನರಳುವ ಚಟ. ಮಗನಿಗೆ ಹಣ ಕೂಡಿ ಹಾಕುವ ಚಟ, ಸೊಸೆಗೆ ಹೇಗಾದರೂ ಒಂದು ಸೈಟು ಅಥವಾ ಮನೆ ಮಾಡಿಕೊಳ್ಳಬೇಕೆಂಬ ಹಂಬಲ.  ಮೊಮ್ಮಗನಿಗೆ ಆನ್‌ಲೈನ್ ಶಾಪಿಂಗ್– ಮೊಮ್ಮಗಳಿಗೆ ಸೆಲ್ಫಿ ಚಟ.

ಈ ಚಟವೃಕ್ಷದಂಥ ಮನೆಗೆ ಚಿತ್ರದುರ್ಗದಿಂದ ಬರುವ ಅತ್ತೆ-ಮಾವ ಮನೆಯವರನ್ನು ಈ ಚಟಗಳ ಭವಾವಳಿಯಿಂದ ಪಾರುಮಾಡಲು ಪಡುವ ಅವಸ್ಥೆ ನಾಟಕದ ಕಥಾವಸ್ತು.
ಈ ಮನೆಗೆ ಸೇರಿಯೂ ಸೇರದವಳಾಗಿ, ಚಟವಿಲ್ಲದೆ ಚಟುವಟಿಕೆಯಿಂದ ಇರುವವಳು ಮನೆ ಕೆಲಸದ ಜಯಾ– ಈ ನಾಟಕಕ್ಕೆ ಹಾಕಿದ ಇಂಗಿನೊಗ್ಗರಣೆ!

ವಾಟ್ಸ್ಆ್ಯಪ್‌, ಫೇಸ್‌ಬುಕ್‌ ಬಳಕೆಯು ಮನೆಯಲ್ಲಿರುವ ಜನರನ್ನು ದ್ವೀಪವಾಗಿಸುತ್ತದೆ ಎನ್ನುವುದು ಸತ್ಯದ ಒಂದು ಮುಖ. ಇವು ಇನ್ನೆಲ್ಲೋ ಒಂದು ಸೇತುವೆಯನ್ನೂ ಕಟ್ಟುತ್ತಿವೆ ಎಂಬುದು ಸತ್ಯದ ಇನ್ನೊಂದು ಮುಖ. ಆದರೆ ಈ ಹೊಸ ಸೇತುವೆಯು ಮನೆಯಲ್ಲಿ ಕುಸಿದ ಸೇತುವೆಯಷ್ಟು ಗಟ್ಟಿ ಇದೆಯೋ ಇಲ್ಲವೋ ಎನ್ನುವುದನ್ನು ಹುಡುಕುವ ಕಾಲ ಇದು.

ಆ ಪದರಗಳನ್ನು ನಾವಿಂದು ಶೋಧಿಸಬೇಕಿದೆ. ಆ ಆಪೇಕ್ಷೆ ನನಗೆ ಶೈಲೇಶ್ ಅವರ ನಾಟಕಗಳ ಮಟ್ಟಿಗೂ ಇದೆ. ಇನ್ನೊಂದು ನಾಟಕವಾಗಿದ್ದಿದ್ದರೆ ನೋಡಿ, ನಕ್ಕು ಮರೆತುಬಿಡಬಹುದು, ಆದರೆ ಶೈಲೇಶ್ ಅವರ ಬೆಂಚ್ ಮಾರ್ಕ್ ಇರುವುದು ಅವರ ನಾಟಕದಲ್ಲಿಯೇ.  ‘ಇಲ್ಲಾ ಎಂದರೆ ಇದೆ’ ಅವರೇ ಬರೆದ ನಾಟಕ. ಆ ನಾಟಕ ಸಹ ಹಾಸ್ಯ ನಾಟಕವಾಗಿಯೇ ಶುರುವಾಗುತ್ತದೆ.

ಎಲ್ಲೋ ಒಂದು ಕಡೆ ಹಾಸ್ಯ ನಾಟಕಗಳು ಈರುಳ್ಳಿಯಂತೆ, ಸುಲಿಯುತ್ತಾ ಹೋಗುವ ಪಯಣ ರೋಚಕವಾಗಿದ್ದರೂ ಎಲ್ಲಾ ಸುಲಿದ ಮೇಲೆ ಉಳಿದದ್ದೇನು ಎಂದು ನೆನಪಿಸಿಕೊಂಡರೆ ಏನೂ ಉಳಿದಿರುವುದಿಲ್ಲ.

ಆದರೆ ‘ಇಲ್ಲ ಎಂದರೆ ಇದೆ’ ಎನ್ನುವುದು ಹಾಗಾಗಿರಲಿಲ್ಲ. ನಾಟಕ ಪ್ರಾರಂಭವಾದಾಗ ಶುರುವಾಗುವ ಸಣ್ಣ ವಿಷಾದದ ದನಿ, ನಾಟಕ ಮುಗಿಯುವುದರಲ್ಲಿ ಪಂಚಮಕ್ಕೇರಿ ಅಲ್ಲೊಂದು ಸ್ಫೋಟ ಸಂಭವಿಸುತ್ತದೆ.  ಅದಾದ ನಂತರ ಅವರು ಕಿನ್ನರಿಜೋಗಿ ಮಕ್ಕಳನ್ನು ಕೊಂಡುಹೋದ ಮೇಲೆ ಏನಾಗಬಹುದು ಎನ್ನುವುದನ್ನು ‘ಇಲ್ಯಾಡಣ್ಣ’ದ ಮೂಲಕ ಅದ್ಭುತವಾದ ಮಕ್ಕಳ ನಾಟಕವನ್ನಾಗಿಸಿದ್ದರು.

ಆ ನಾಟಕಗಳ ಬೆಂಚ್ ಮಾರ್ಕ್ ಬೇಕೆಂದರೂ, ಬೇಡವೆಂದರೂ ಶೈಲೇಶ್ ಅವರನ್ನು ಬಿಡುವುದಿಲ್ಲ. ಇದು ಯಾವುದೇ ಗ್ರೇ ಶೇಡ್ಸ್ ಇಲ್ಲದೆ, ಕಪ್ಪು ಬಿಳುಪಾಗಿಯೇ ಕಥೆ ಹೇಳುವ ನಾಟಕ. ‘ಸಡನ್ನಾಗಿ ಸತ್ತೋದ್ರೆ’ ಎನ್ನುವುದು ಎಷ್ಟು ಭಯಂಕರವಾದ ಸಾಧ್ಯತೆಯೋ ‘ಅಕಸ್ಮಾತ್ತಾಗಿ ಸಡನ್ನಾಗಿ ಸತ್ತೋಗದೆಯೇ ಉಳಿದುಬಿಡಬಹುದು’ ಎನ್ನುವುದೂ ಸಹ ಒಂದು ನೆನಪಿನಲ್ಲಿಡಬೇಕಾದ ಸಾಧ್ಯತೆಯೇ.

ಇಲ್ಲಿ ಮೊಮ್ಮಗ ಮೊದಲ ಸಾಧ್ಯತೆಗನುಸಾರವಾಗಿ ‘ಇಂದು’ ಈಂಟಿ ಬದುಕುತ್ತಿದ್ದರೆ, ತಂದೆ ಮತ್ತು ತಾತ ಬದುಕು ಇನ್ನೆಷ್ಟೋ ಇದೆ, ಅದಕ್ಕಾಗಿ ಇಂದುಗಳನ್ನು ಮುಡಿಪಾಗಿಡಬೇಕು ಎಂದು ಬದುಕುತ್ತಿರುತ್ತಾರೆ.

ಎರಡನ್ನೂ ನಿರಾಕರಿಸುವ ಮಾವ ಎರಡರ ನಡುವಿರುವ ಸತ್ಯವನ್ನು ತಾನೂ ಗುರುತಿಸಲು ಸೋಲುತ್ತಾನೆ ಅನ್ನಿಸುತ್ತದೆ.  ವೈಯಕ್ತಿಕವಾಗಿ ಒಬ್ಬರಿಗೆ ಸೂಚಿಸುವ ಪರಿಹಾರವನ್ನು ಸಾಮೂಹಿಕವಾಗಿ ನಿಕಷಕ್ಕೊಡ್ಡಿದಾಗ ಒಬ್ಬರಿಗೆ ಸೂಚಿಸುವ ಪರಿಹಾರ, ಇನ್ನೊಬ್ಬರ ಪರಿಹಾರಕ್ಕೆ ಡಿಕ್ಕಿ ಹೊಡೆಯುತ್ತದೆ.

ಹಣ ಪೋಲು ಮಾಡಬಾರದು ಉಳಿಸಬೇಕು ಎನ್ನುವ ಮಗನ ಮಾತಿನ ಇನ್ನೊಂದು ದನಿಯಾಗಿಯೇ ಸೊಸೆ ಸೈಟು ಮನೆ ತೆಗೆದುಕೊಳ್ಳೋಣ ಎನ್ನುತ್ತಿರುತ್ತಾಳೆ.  ಎರಡೂ ಆಸೆಗಳು ಡಿಕ್ಕಿ ಯಾಕೆ ಹೊಡೆಯಬೇಕು ಎನ್ನುವುದು ಗೊಂದಲ. ಮೊಮ್ಮಗಳ ಸೆಲ್ಫಿ ಹುಚ್ಚನ್ನು ಅತಿಯಾಗಿ ಎಳೆದಂತಾಗಿ ಪುನರಾವರ್ತನೆ ಆಗಿದೆ.  ಇದ್ದಕ್ಕಿದ್ದಂತೆ ಬರುವ ಮಂಕುತಿಮ್ಮನ ಕಗ್ಗದ ಪದ್ಯಗಳು ಸಹಜವಾಗಿ ಹೊಂದುವುದಿಲ್ಲ.

ಇಡೀ ನಾಟಕದಲ್ಲಿ ಒಂದು ಫಿಲ್ಲರ್ ನಂತೆ ಬಂದರೂ ಮನಸನ್ನು ಗೆಲ್ಲುವ ಪಾತ್ರ ಮನೆ ಕೆಲಸದವಳದು.  ಆ ಪಾತ್ರದಲ್ಲಿ ಡಾ ಬೃಂದಾ ಒಂದು ಸರ್ಪ್ರೈಸ್ ಪ್ಯಾಕೇಜ್. ಅಲ್ಲೆಲ್ಲೂ ನಮಗೆ ಬೃಂದಾ ಕಾಣುವುದೇ ಇಲ್ಲ. ಮನೆಕೆಲಸದವಳ ಸಣ್ಣ ಕೆಲಸಗಳ್ಳತನ, ಗಾಸಿಪ್ ಚಪಲ, ಅನಗತ್ಯ ಕುತೂಹಲ ಎಲ್ಲವನ್ನೂ ಅವರು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಾರೆ.

ಮಗ ವ್ಯಾಯಾಮ ಮಾಡುತ್ತಾ ಸೋಫಾದ ಒಂದು ಬದಿಯನ್ನು ಮೇಲೆತ್ತಿದ್ದಾಗ ‘ಅಣ್ಣ ಅಣ್ಣ ಒಂದು ನಿಮಿಷ ಸೋಫಾ ಕೆಳಗೆ ಕಸ ಗುಡಿಸಿಕೊಂಡು ಬಿಡ್ತೀನಿ’ ಎಂದು ಪೊರಕೆ ಹಿಡಿದು ಓಡಿ ಬರುವ ಜಯಾ ಥೇಟ್ ನಮ್ಮ ಮನೆಯಲ್ಲಿ ನಾವು ನೋಡುವ ದೃಶ್ಯವೇ ಆಗಿಬಿಡುತ್ತಾಳೆ.

ಹಾಗೆಯೇ ಏನೇ ಹೇಳಿದರೂ ‘ಹೂ, ಹೂ’ ಅನ್ನುತ್ತಲೇ ಮಾತಾಡಿಸಿದರೆ ಸಾಕು ತನ್ನ ಕಾಯಿಲೆಗಳ ವೃತ್ತಾಂತ ಶುರು ಮಾಡುವ ಅಜ್ಜ ಮತ್ತು ಸೀರಿಯಲ್ ನೋಡುತ್ತಾ ಮೈಮರೆಯುವ, ಅಪಾರ ಮಾತಿನ ಚಪಲದ ಅತ್ತೆಯಾಗಿ ಸುಷ್ಮಾ ನಿಜ ಜೀವನದಿಂದ ಎದ್ದು ಬಂದ ಪಾತ್ರಗಳು.

ಮೊಮ್ಮಗನಾಗಿ ಭರತ್, ಚಟುವಟಿಕೆಯ ಮಾವನಾಗಿ ಶೈಲೇಶ್, ಸೊಸೆಯಾಗಿ ಡಾ.ಮಂಗಳಾ ಸಹ ಚೆನ್ನಾಗಿ ನಟಿಸಿದ್ದಾರೆ.  ಬೆಳಕಿನ ನಿರ್ವಹಣೆ ಸ್ವಲ್ಪ ಹದತಪ್ಪಿದಂತಿತ್ತು. ಜೊತೆಗೆ ಬೆಳಿಗ್ಗೆ ಸುಪ್ರಭಾತ ಬರುವಾಗ ಮನೆಯ ದೀಪ ಹಾಕುವ, ಅದು ಆರಿಸಿದರೆ ಕತ್ತಲು ಗವ್ವೆನ್ನುವ ದೃಶ್ಯ ಅಲ್ಲಿ ಹೊಂದುತ್ತಿರಲಿಲ್ಲ. ಸಂಗೀತದ ಬಗ್ಗೆ ಎರಡು ಮಾತಿಲ್ಲ.

ಒಂದಿಷ್ಟು ಸರಸ, ಒಂದಿಷ್ಟು ಕಾಲೆಳೆಯುವಿಕೆ, ಬಾಯ್ತುಂಬಾ ನಗು ಈ ನಾಟಕದಲ್ಲಿ ಗ್ಯಾರೆಂಟಿಯಾಗಿ ಸಿಗುವಂಥದ್ದು. ನಾಟಕಕಾರ ಶೈಲೇಶ್ ಹಾಸ್ಯವನ್ನು ಚರ್ವಿತಚರ್ವಣವಾಗಿಸದೆ ಸಹಜವಾಗಿ ಸನ್ನಿವೇಶಗಳನ್ನು ಹೆಣೆದಿದ್ದಾರೆ. ಡಾ.ಕಶ್ಯಪ್ ಅವರ ನಿರ್ದೇಶನ ಎಂದಿನಂತೆ ಅಚ್ಚುಕಟ್ಟು.

Advertisements

ಮನಸಿನ ಓಣಿಯಲಿ ಘಂ ಎಂದ ಮಲ್ಲಿಗೆ

ಪ್ರಜಾವಾಣಿ 
10 Aug, 2016

psmec10malligeಅವಳೊಬ್ಬಳು ಮಹಾರಾಣಿ, ಗಂಡನೇ ಪ್ರಪಂಚ ಎಂದುಕೊಂಡವಳು. ಮದುವೆಯ ಹೊಸ ಹೊಳಪು ಮಂಕಾಗಿ ಗಂಡನ ಪ್ರಪಂಚದಲ್ಲಿ ತಾನು ಒಂದು ಭಾಗ ಮಾತ್ರ ಎಂದು ಗೊತ್ತಾದಾಗ ಅದಕ್ಕೆ ಒಗ್ಗಿಕೊಳ್ಳದೆ ಕೊರಗುವವಳು. ಅದಕ್ಕಾಗಿ ಅವಳು ಬೆಲೆ ತೆರುತ್ತಾಳೆ.

ಇನ್ನೊಬ್ಬಳು ಇಂದಿನ ಹೆಣ್ಣು, ಗಂಡ ತನ್ನ ಇರುವಿಕೆಯ ಒಂದು ಭಾಗ ಎಂದುಕೊಂಡು ಬದುಕುವವಳು.  ತನ್ನ ನಿರ್ಧಾರ ತಾನು ತೆಗೆದುಕೊಳ್ಳುವವಳು.  ಗಂಡನ ಆಚೆಗೂ ತನ್ನ ಬದುಕನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಬೆಲೆ ತೆರುತ್ತಾಳೆ.

ಹೆಣ್ಣಿನ ದುರಂತ ಇರುವುದು ಇಲ್ಲಿ.  ಗಂಡು ಅವಳನ್ನು ಕೇವಲ ತನ್ನ ಇರುವಿಕೆಯ ಪೂರಕತೆಗೆ ಸೃಷ್ಟಿಯಾಗುವವಳು ಎಂದು ತಿಳಿಯುವುದರಲ್ಲಿ ಮತ್ತು ಹೆಣ್ಣು ತನ್ನ ಇರುವಿಕೆಯ ಸಾರ್ಥಕತೆಯನ್ನು ಅವನ ಅನುಮೋದನೆಯಲ್ಲಿ ಹುಡುಕುವಲ್ಲಿ.

ಗಂಡಿನ ದುರಂತ ಇರುವುದು ಹೆಣ್ಣಿನ ನಿಯತ್ತನ್ನು ಕೇವಲ ಅವಳ ದೇಹದಲ್ಲಿ ಹುಡುಕುವುದರಲ್ಲಿ ಮತ್ತು ಅವಳ ಲೈಂಗಿಕ ಶಕ್ತಿ ಮತ್ತು ತನ್ನ ಮಿತಿಯ ಬಗೆಗಿರುವ ಹೆದರಿಕೆಯಲ್ಲಿ.

ಕೆ.ವೈ.ನಾರಾಯಣ ಸ್ವಾಮಿ ಮತ್ತು ಪ್ರಕಾಶ್ ಶೆಟ್ಟಿ ಅವರ ಜೋಡಿ ಈಗಾಗಲೇ ಅನಭಿಜ್ಞ ಶಾಕುಂತಲ ಎನ್ನುವ ಕನಸನ್ನು ರಂಗಾಸಕ್ತರ ಮುಂದೆ ಸಿಂಗರಿಸಿ ಇಟ್ಟಿದೆ. ಜೊತೆಗೆ ದೇಸಿ ಕಥೆಗಳು ಕೆವೈಎನ್ ಅವರ ತಾಕತ್ತು. ಸಂಗೀತ ಅವರ ನಾಟಕದಲ್ಲಿ ಅತ್ಯಂತ ಸಹಜವಾಗಿ, ಸಾವಯವವಾಗಿ ಒಡಮೂಡಿರುತ್ತದೆ. ಹಾಗಾಗಿ ಮಲ್ಲಿಗೆ ನಾಟಕದ ಬಗೆಗಿನ ನಿರೀಕ್ಷೆಗಳು ಹೆಚ್ಚೇ ಇದ್ದವು.

ಒಂದು ಹುಟ್ಟುಹಬ್ಬದ ಕೇಕ್, ಅದರ ಮುಂದೆ ಕುಳಿತ ಏಕಾಕಿ ಗಂಡು, ಟಕ್ ಟಕ್ ಎಂದು ತಿರುಗುವ ಗಡಿಯಾರ, ಕಾಯುವ ಇವನು ಮತ್ತು ಬಾರದ ಅವಳು.  ಗಡಿಯಾರದ ಜೊತೆಯಲ್ಲೇ ಮೂಕಸಾಕ್ಷಿಗಳಾಗಿರುವ ಎರಡು ಬೊಂಬೆಗಳು.  ನಾಟಕ ಇಲ್ಲಿಂದ ಶುರುವಾಗುತ್ತದೆ.

ಆಕೆ ಬರುವುದಿಲ್ಲ, ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.  ವಿಚಾರಣೆಗೆಂದು ಪೊಲೀಸ್ ಇನ್‌ಸ್ಪೆಕ್ಟರ್ ಬರುತ್ತಾನೆ.  ಆ ಪೊಲೀಸ್ ಇನ್‌ಸ್ಪೆಕ್ಟರ್‌ನ ನಿನ್ನೆಗಳಲ್ಲಿ ಇನ್ನೊಂದು ಹೆಣ್ಣಿದ್ದಾಳೆ. ಗಂಡನ ನಿರಾಸಕ್ತಿ ಮತ್ತು ಅನುಮಾನದಿಂದ ಶಿಥಿಲವಾದವಳು.

ಆತ ಅವಳಿಗೆ ವಿಚ್ಛೇದನ ಎನ್ನುವ ಶಿಕ್ಷೆಯನ್ನು ಬಿಡುಗಡೆ ಎನ್ನುವ ಉಡುಗೊರೆಯಾಗಿ ಕೊಟ್ಟವನು.  ಅವನ ಕಣ್ಣಿಗೆ ಆ ಕನ್ನಡಕ ಇದೆ.  ಆತ ವಿಚಾರಣೆ ನಡೆಸುವಾಗಲೇ ಆ ಮನೆಯಲ್ಲಿದ್ದ ಎರಡು ಗೊಂಬೆಗಳು ತಮ್ಮ ಲೋಕದಲ್ಲಿ ನಿನ್ನೆ ಇಂದುಗಳ ನಡುವೆ ಓಡಾಡುವ ಕಥೆ ಇದು.

ಇಲ್ಲಿರುವುದು ಒಂದು ಗೊಂಬೆ ಮತ್ತು ಅದರ ಸೂತ್ರಧಾರ.  ಗೊಂಬೆಗೆ ಕಣ್ಣುಗಳಿವೆ ದನಿ ಇಲ್ಲ, ಸೂತ್ರಧಾರನಿಗೆ ದನಿ ಇದೆ ಆದರೆ ಕಣ್ಣುಗಳಿಲ್ಲ.  ದನಿ ಇಲ್ಲದ ನೋಟ ಮತ್ತು ನೋಟ ದಕ್ಕದ ಮಾತು, ಈ ಅವಸ್ಥೆಯೇ ನಾಟಕಕ್ಕೆ ಒಂದು ರೂಪಕ.  ಕಣ್ಣು ಕಿವಿ ಎರಡೂ ಸೇರಿದಾಗಲೇ ಸತ್ಯ ಸಂಪೂರ್ಣ ಎನ್ನುವುದನ್ನು ನಾಟಕ ಕಟ್ಟಿಕೊಡುತ್ತಾ ಹೋಗುತ್ತದೆ.

ದನಿ ಇರುವ ಗೊಂಬೆಗಳ ಮೂಲಕವೇ ನಾಟಕವನ್ನು ನೋಡುವ ನಾವು ಅವುಗಳ ಮೂಲಕವೇ ನಾಟಕವನ್ನು ಅನುಸಂಧಾನ ಮಾಡಿಕೊಳ್ಳಬೇಕಾಗುತ್ತದೆ.  ಆ ಗೊಂಬೆ ಮತ್ತು ಸೂತ್ರಧಾರ ಇಡೀ ನಾಟಕವನ್ನು ಆವರಿಸಿಕೊಂಡಿದ್ದಾರೆ.

ನಾಟಕವನ್ನು ಕೊಂಡೊಯ್ಯುವುದು ಆ ಗೊಂಬೆ ಮತ್ತು ಸೂತ್ರಧಾರ ಇಬ್ಬರೇ.  ನಾಟಕ ನೋಡುವವರಿಗೆ ಮೊದಲು ನಾಟಕ ದಕ್ಕುವುದು ಒಂದು ರೀತಿ, ಆದರೆ ಆಮೇಲೆ ಆ ನಾಟಕವನ್ನು ಹೀಗೆ ನೋಡಿ ಎಂದು ಗೊಂಬೆ ನಮ್ಮನ್ನು ನಿರ್ದೇಶಿಸುತ್ತದೆ.  ನಾಟಕದ ಮೊದಲಿನಿಂದ ಕಡೆಯವರೆಗೂ ರಂಗದ ತುಂಬಾ ಓಡಾಡುವ ಗೊಂಬೆ ಮತ್ತು ಸೂತ್ರಧಾರನ ಎನರ್ಜಿ ಲೆವೆಲ್ ಅದ್ಭುತ.  ಅವುಗಳ ವಿನ್ಯಾಸ ಮತ್ತು ಚಲನೆಗೆ ಬೆರಗಾಗುವ ಜೊತೆಜೊತೆಯಲ್ಲಿಯೇ ನಾಟಕಕ್ಕೆ ಅದೇ ಒಂದು ಮಿತಿಯಾಗಬಹುದೇ ಎನ್ನುವ ಸಂದೇಹ ಸಹ ಕಾಡುತ್ತದೆ.

ನಾಟಕದಲ್ಲಿ ಸ್ಥಳೈಕ್ಯ ಮತ್ತು ಭಾವೈಕ್ಯ ಹೇಗೆ ಮೇಳೈಸಿರಬೇಕೆಂದರೆ ಅಲ್ಲಿ ಪಾತ್ರಗಳು ಮತ್ತು ವಿಕ್ಷಕರ ನಡುವೆ ಯಾವುದೇ ತರ್ಜುಮೆದಾರ ಇರಬಾರದು.  ಪಾತ್ರಗಳ ನೋವು, ನಲಿವು, ಸಂಕಟ, ದುರಂತ ನಮ್ಮ ನೋಟ ಮತ್ತು ನಮ್ಮ ಕೇಳುವಿಕೆಗಳಿಂದ ನಮ್ಮದಾಗುತ್ತಾ ಹೋಗಬೇಕು.  ಆದರೆ ಇಲ್ಲಿ ಅವು ನಮ್ಮದಾಗುತ್ತವೆಯೋ ಅಥವಾ ಬೊಂಬೆ ಹೇಗೆ ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ನಿರ್ದೇಶಿಸುತ್ತದೆಯೋ ಎನ್ನುವ ಪ್ರಶ್ನೆ ನಾಟಕ ಮುಗಿದ ಮೇಲೆ ನಮ್ಮನ್ನು ಕಾಡುತ್ತದೆ.

ಸೂತ್ರಧಾರ ಇಲ್ಲಿ ನಾಟಕಕ್ಕೆ ಮೊದಲು ಅಥವಾ ಕಡೆಗೆ ಬರುವುದಿಲ್ಲ, ಇಡೀ ನಾಟಕದುದ್ದಕ್ಕೂ ಇರುತ್ತಾನೆ. ನಾಟಕದ ಒಂದು ದೃಶ್ಯದಲ್ಲಿ ಮಲ್ಲಿಗೆರಾಯ ‘ನನ್ನ ನಿನ್ನ ಸಂಬಂಧದಲ್ಲಿ ಇನ್ನೊಬ್ಬರು ನುಸುಳುವಷ್ಟು ತೆರಪಿದ್ದಿದ್ದಾದರೂ ಎಲ್ಲಿ’ ಎಂದು ಮಿಡುಕುತ್ತಾನೆ. ನಾಟಕದಲ್ಲಿ ಸಹ ನಮ್ಮ ಮತ್ತು ಪಾತ್ರಗಳ ನಡುವಿನ ಈ ತೆರೆಪಿನಲ್ಲಿ ಬೊಂಬೆ ನುಸುಳಿ ಆಡುತ್ತಲೇ ಇರುತ್ತದೆ.

ಮಲ್ಲಿಗೆರಾಯ ಚೆಂದುಳ್ಳಿ ಚೆಲುವ, ಅವನು ನಕ್ಕರೆ ಮಲ್ಲಿಗೆ ಅರಳುತ್ತಾವೆ.  ಮಲ್ಲಿಗೆ ಅವನ ರಾಣಿ. ಅವನು ನಕ್ಕರೆ ಮಲ್ಲಿಗೆ, ಅವಳೋ ತಾನೇ ಮಲ್ಲಿಗೆ.  ತನ್ನ ನಗುವನ್ನು ತಾನೇ ಮೋಹಿಸುವ ಮಲ್ಲಿಗೆರಾಯ ತನ್ನ ಗೆಳೆಯ ಚೆನ್ನಿಗರಾಯನ ಆಸ್ಥಾನಕ್ಕೆ ಹೋಗುತ್ತಾನೆ. ಆದರೆ ಅಲ್ಲಿ ಅವನಿಗೆ ನಗಲು ಆಗುವುದಿಲ್ಲ. ಅವನ ಎದೆಯ ಮಲ್ಲಿಗೆ ಗಿಡ ಸತ್ತಿರುತ್ತದೆ.  ಎದೆಯಲ್ಲಿನ ಮಲ್ಲಿಗೆ ಗಿಡ ಹೂದುಂಬಲು ನೀರೆರೆಯುವುದು ತನ್ನ ಪವಾಡಶಕ್ತಿಗಿಂತ ಮಿಗಿಲಾಗಿ ತನ್ನನ್ನು ಪ್ರೀತಿಸುವವರ ಪ್ರೀತಿ ಎನ್ನುವುದು ಮಲ್ಲಿಗೆರಾಯನಿಗೆ ಅರ್ಥವಾಗುವುದೇ ಇಲ್ಲ. ಸಿಟ್ಟಾದ ಚೆನ್ನಿಗರಾಯ ಮಲ್ಲಿಗೆರಾಯನನ್ನು ಸೆರೆಮನೆಗೆ ದೂಡುತ್ತಾನೆ.

ಅಲ್ಲಿ ಇನ್ನೊಂದು ಕಥೆ ಇದೆ.  ಅಪರಾಧವೇ ಮಾಡದೆ ಅಪರಾಧಿಯಾದ ಮತ್ತೊಂದು ಹೆಣ್ಣಿನ ಕಥೆ ಅದು. ಅಲ್ಲಿಯವರೆಗೂ ಸೂತ್ರಧಾರ ಕಥೆ ಹೇಳುತ್ತಾ ಬಂದಿರುತ್ತಾನೆ, ಈಗ ಬೊಂಬೆ ಅವನು ಒಂದು ಕ್ಷಣ ತೂಕಡಿಸಿದಾಗ  ನಡೆದ ಘಟನೆಗಳನ್ನು ತಾನು ಅನಾವರಣಗೊಳಿಸುತ್ತಾ ಹೋಗುತ್ತದೆ.  ಸೂತ್ರಧಾರನಿಗೆ ಗೊಂಬೆ ಕಥೆ ಹೇಳುವ ದೃಶ್ಯವನ್ನು ನಿರ್ದೇಶಕರು ತುಂಬಾ ಸುಂದರವಾಗಿ ಕಟ್ಟಿಕೊಡುತ್ತಾರೆ.

ಮಲ್ಲಿಗೆರಾಯ ನಕ್ಕಾಗ ಭೂಮಿಯಲ್ಲೆಲ್ಲಾ ಮಲ್ಲಿಗೆ ಅರಳಿ ಗಂಧದ ಘಮಲು ಆವರಿಸುವ ಸೊಗಸನ್ನು ಪದಗಳಲ್ಲಿ ಕಟ್ಟಿಕೊಡುವುದು ಬೇರೆ, ಆದರೆ ಅದನ್ನು ದೃಶ್ಯದಲ್ಲಿ ಕಟ್ಟಿಕೊಡುವುದು ಒಂದು ಸವಾಲಿನ ಕೆಲಸ. ಆ ದೃಶ್ಯ ರಂಗದ ಮೇಲೆ ಒಂದು ಕನಸಿನಂತೆ ಚಿತ್ತಾರವಾಗಿದೆ. ಇಡೀ ರಂಗದ ಮೇಲೆ ಮಲ್ಲಿಗೆ ನಕ್ಷತ್ರದ ಹೂಗಳಂತೆ ಅರಳಿಕೊಳ್ಳುತ್ತದೆ. ಬಾನಿನಿಂದ ಮಲ್ಲಿಗೆ ಹೂಗಳು ಮಂಜು ಉದುರಿದಂತೆ ಹನಿಯುತ್ತದೆ. ಅದಕ್ಕಾಗಿ ದೃಶ್ಯ ಕಲ್ಪನೆ ಮಾಡಿದ ನಿರ್ದೇಶಕ ಪ್ರಕಾಶಶೆಟ್ಟಿಯವರನ್ನು ಮತ್ತು ಬೆಳಕು ವಿನ್ಯಾಸಗೊಳಿಸಿದ ವಿನಯಚಂದ್ರ ಅವರನ್ನು ಅಭಿನಂದಿಸಬೇಕು.

ಆದರೆ ಆ ಇಡೀ ದೃಶ್ಯಕ್ಕೆ ಹೊಂದದೆ ಇದ್ದಿದ್ದು ಅಲ್ಲಿದ್ದ ಮಾನಿಟರ್ ಪರದೆಯ ಮೇಲೆ ಅರಳುತ್ತಿದ್ದ ಮಲ್ಲಿಗೆ ಹೂಗಳು. ಪಯಣದ ದೃಶ್ಯಗಳಲ್ಲಿ ಕುದುರೆ ಏರಿ ಪಯಣಿಸುವ ಮಲ್ಲಿಗೆ ರಾಯ ಮತ್ತು ಸೈನಿಕರ ಆಂಗಿಕದ ಎದುರು ಆ ಮಾನಿಟರ್ ಮೇಲಿನ ಬೊಂಬೆಯಾಟ ಸಪ್ಪೆಯಾಗಿ ಬಿಡುತ್ತದೆ.

ಮೊದಲೇ ಹೇಳಿದ ಹಾಗೆ ಜಾನಪದ ಕಥೆಗಳು ಕೆವೈಎನ್ ಅವರ ತಾಕತ್ತು, ಅದಕ್ಕೆ ಸರಿಸಾಟಿಯಾಗಿ ಅಂದರೆ ಮಲ್ಲಿಗೆಯ ನೋವಿಗೆ ಸರಿಸಾಟಿಯಾಗಿ ಇಲ್ಲಿ ನಂದಿನಿಯ ದುರಂತ ನಮ್ಮನ್ನು ಅಲ್ಲಾಡಿಸುವುದಿಲ್ಲ.  ನಿನ್ನೆಗೂ ಇಂದಿಗೂ ಕೊಂಡಿ ಆಗುವುದು ಗೊಂಬೆ ಮಾತ್ರವೇ ಹೊರತು ಅಂದಿನ ಮಲ್ಲಿಗೆ ಇಂದಿನ ನಂದಿನಿ ಆಗುವುದಿಲ್ಲ. ಇಲ್ಲಿರುವ ಎಲ್ಲಾ ಹೆಣ್ಣುಗಳೂ ‘ನಿರಪರಾಧಿ’ಗಳೇ. ಹಾಗಾಗಿ ಅವರಿಗೆ ಶಿಕ್ಷೆಯಾಗಿದ್ದು ತಪ್ಪು ಎಂದು ಗೊಂಬೆ ಹಾಗು ಸೂತ್ರಧಾರ ಭರತವಾಕ್ಯ ಹಾಡುತ್ತಾರೆ.

ಆದರೆ ಈ ‘ಅಪರಾಧಿ ಮತ್ತು ‘ನಿರಪರಾಧಿ’ ಎನ್ನುವ ಕಪ್ಪು ಬಿಳಿ ನಡವಳಿಕೆಗಳನ್ನು ನಿರ್ಧರಿಸುವವರು ಯಾರು? ಅಕಸ್ಮಾತ್ ಮಲ್ಲಿಗೆರಾಯನ ವಿಮುಖತೆಗೆ ಬೇಸರಾದ ಮಲ್ಲಿಗೆ ತಾನೊಂದು ಪ್ರೇಮಕ್ಕೆ ಸೋತಿದ್ದರೆ ಅಥವಾ ರಾಜುವಿನ ಕೀಳರಿಮೆಯಿಂದ ನೊಂದ ನಂದಿನಿ ಮೋಹನನಲ್ಲಿ ‘ಕೇವಲ’ ಸ್ನೇಹದ ಆಚೆಗೂ ಒಂದು ಬಂಧವನ್ನು ಹುಡುಕಿಕೊಂಡಿದ್ದರೆ ಆಗ ಅವರಿಬ್ಬರದೂ ಶಿಕ್ಷಾರ್ಹ ಅಪರಾಧ ಎನ್ನುವಂತಹ ಸಂದೇಶವನ್ನು ಇದು ಕೊಡುವುದಿಲ್ಲವೇ?

ಇಲ್ಲಿ ಹೆಣ್ಣುಗಳ ‘ನಿರಪರಾಧಿತ್ವದ’ ವ್ಯಾಖ್ಯಾನವನ್ನು ಮತ್ತೆ ಪಿತೃಪರ ವ್ಯವಸ್ಥೆ ಮಾಡುತ್ತಿಲ್ಲ ತಾನೆ? ತಮ್ಮ ಬರವಣಿಗೆಗಳಲ್ಲಿ ಸದಾ ಒಂದು ಹೆಣ್ಣು ನೋಟವನ್ನು ಕಾಪಿಟ್ಟುಕೊಂಡು ಬಂದವರು ಕೆವೈಎನ್.  ಅಂತಹ ಒಂದು ಸಾಧ್ಯತೆ ಈ ನಾಟಕದ ಆಶಯವನ್ನು ಮತ್ತಷ್ಟು ವಿಸ್ತರಿಸಬಹುದಿತ್ತು ಅನ್ನಿಸುತ್ತದೆ. ಈಗ ನಾಟಕದಲ್ಲಿ ಹೆಣ್ಣಿನ ಮಾತುಗಳನ್ನು ಬೇರೆಯವರೇ ಆಡಿದ್ದಾರೆ, ಆ ಹೆಣ್ಣುಗಳೇ ಮಾತನಾಡಿದ್ದರೆ ಅವರು ಬಿಚ್ಚಿಡುತ್ತಿದ್ದ ಸತ್ಯಗಳು ಏನಿರುತ್ತಿದ್ದವೋ ಬಲ್ಲವರು ಯಾರು?

ಇವೆಲ್ಲಾ ನಾಟಕ ನೋಡುತ್ತಿದ್ದಾಗ ಮೂಡಿದ ಪ್ರಶ್ನೆಗಳು.  ಆದರೆ ಅದರಾಚೆಗೂ ನಾಟಕ ಒಂದು ರಂಗಾನುಭವವನ್ನು ಪ್ರೇಕ್ಷಕರಿಗೆ ದಾಟಿಸುತ್ತದೆ.

ಮೊದಲೇ ಹೇಳಿದ ಹಾಗೆ ಗೊಂಬೆ ಮತ್ತು ಸೂತ್ರಧಾರನ ಮೂಲಕ ಇಡೀ ನಾಟಕವನ್ನು ವಿನ್ಯಾಸಗೊಳಿಸಿರುವುದು ಸೊಗಸಾಗಿದೆ.  ಮೀರಾ ಅರುಣ್ ಮತ್ತು ಮಾನಸಾ ಮುಸ್ತಫಾರ ವಸ್ತ್ರವಿನ್ಯಾಸ, ರಾಮಕೃಷ್ಣ ಬೆಳ್ತೂರರ ಪ್ರಸಾಧನ ಚಮತ್ಕಾರ ಹುಟ್ಟಿಸುತ್ತದೆ.  ಶಶಿಧರ ಅಡಪರ ಕಲಾವಿನ್ಯಾಸದ ಬಗ್ಗೆ ಹೆಚ್ಚಿಗೇನು ಹೇಳಲಿ, ಅವರು ಕನಸನ್ನು ಕಾಣಬಲ್ಲರು, ಅಷ್ಟೇ ಅಲ್ಲ, ಕಟ್ಟಬಲ್ಲವರು ಸಹ.  ಗಜಾನನ ನಾಯ್ಕ ಮತ್ತು ಪ್ರಕಾಶ್ ಶೆಟ್ಟಿಯವರ ಸಂಲಗ್ನದಲ್ಲಿ ಸಂಗೀತ ಕಳೆಗಟ್ಟುತ್ತದೆ.

ನಾನೂ ಮೆಲ್ಲನೆ ಇಲ್ಲಿಗೆ..

ಒಂದು ಸ್ಥಳದ ಸುತ್ತಲೂ ನಮ್ಮ ನೆನಪುಗಳ ಎಷ್ಟೋ ಭಾವ ಕೋಶಗಳ ಇರುತ್ತದೆ.

ಜಯನಗರ ಫೋರ್ತ್ ಬ್ಲಾಕ್ ಅಂದರೆ ನನಗೆ ಶಾಪಿಂಗ್ ಕಾಂಪ್ಲೆಕ್ಸ್, ಪವಿತ್ರಾ ಹೋಟೆಲ್ ಕಾಫಿ, ಎದುರಿನ ಹೂ ಅಂಗಡಿ ಅಜ್ಜಿಯ ಮಲ್ಲಿಗೆ ಹೂ, ಕಾಂಪ್ಲೆಕ್ಸ್ ಸುತ್ತಾ ಇರುವ ಮರಗಳ ಗುಲಾಬಿ ಹೂಗಳು, ವಾಡಿಲಾಲ್ ಐಸ್ಕ್ರೀಂ, ಗಣೇಶ್ ಭವನ್ ದೋಸೆ, ನಾಗಶ್ರೀ ಪುಸ್ತಕ, ಜೊತೆಗೆ Calipso ಸಂಗೀತದ ಅಂಗಡಿ.

ಮೊನ್ನೆ ಯಾವಾಗಲೋ ಕಡೆ ಹೋದಾಗ ಆ ಅಂಗಡಿ ಇಲ್ಲದ್ದು ಕಂಡು ಆತ್ಮೀಯರೊಬ್ಬರನ್ನು ಕಳೆದುಕೊಂಡ ಸಂಕಟ. ನಿನ್ನೆ ವಾಕಿಂಗ್ ಮಾಡುವಾಗ ಸಪ್ನಾ ಬುಕ್ ಹೌಸ್ ಹತ್ರ ಅದೇ ಅಂಗಡಿ ಕಾಣಿಸಬೇಕೆ?! ಅಲ್ಲಿದ್ದ ಅಂಗಡಿ ಯಾಕೆ ಮುಚ್ಚಿದಿರಿ ಅಂದರೆ ಅವರು ಹೇಳಿದ್ದು ’ಡೌನ್ ಲೋಡ್ ಮಾಡಿಕೊಂಡು ಹಾಡು ಕೇಳುವ ಸಮಯದಲ್ಲಿ, ದುಡ್ಡು ಕೊಟ್ಟು ಯಾರು ಸೀಡಿ ತಗೋತಾರೆ ಮೇಡಂ’ ಅಂತ. ಕೈಲಿದ್ದ ದುಡ್ಡಿಗೆ ಕೈ ತುಂಬಾ ಸಂಗೀತ ಹೊತ್ತು ತಂದೆ.

ನನ್ನ ಜಯನಗರದ ಒಂದು ಭಾಗ ಮತ್ತೆ ಸಿಕ್ಕ ಸಂಭ್ರಮ ಮನಸ್ಸಿನ ತುಂಬಾ..

ಹಾಗೆ ನನ್ನ ಕೈಗೆ ನನ್ನ ಜಯನಗರ ಸಿಕ್ಕಾಗಲೇ ಅನಿಸಿದ್ದು ಅಂತಹ ಭಾವಕೋಶದ ಒಂದು ಪುಟ್ಟ ಜಾಗ ನನಗೂ ಬೇಕು ಎಂದು..

ಹಾಗಾಗಿ ಈ ನಾನು ನನ್ನ ಬರಹಗಳನ್ನು ನನ್ನ ಅಂಗೈನಲ್ಲಿ ಹಿಡಿದು ನಿಮ್ಮ ಮುಂದೆ..